ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು 2006 ರಲ್ಲಿ ಕಿವುಡುತನದ ತಡೆಗಟ್ಟುವಿಕೆ ಮತ್ತು ನಿಯಂತ್ರಣಕ್ಕಾಗಿ ರಾಷ್ಟ್ರೀಯ ಕಾರ್ಯಕ್ರಮವೊಂದನ್ನು (NPPCD) ಪ್ರಾರಂಭಿಸಿತು. ಈ ಕಾರ್ಯಕ್ರಮವನ್ನು ಬೆಂಬಲಿಸಲು, ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆವು ತಳಮಟ್ಟದಲ್ಲಿ ಸೂಕ್ತವಾದ ಮಾನವಶಕ್ತಿಯನ್ನು ಅಭಿವೃದ್ಧಿಪಡಿಸುವ ಜವಾಬ್ದಾರಿಯನ್ನು ವಹಿಸಿಕೊಂಡಿತು.
ಮೈಸೂರಿನ ಅಖಿಲ ಭಾರತ ವಾಕ್-ಶ್ರವಣ ಸಂಸ್ಥೆಯು ಸಹಾಯಕ / ತಂತ್ರಜ್ಞ ಮಟ್ಟದಲ್ಲಿ ಹೆಚ್ಚಿನ ಮಾನವ ಸಂಪನ್ಮೂಲ ಅಭಿವೃದ್ಧಿಯನ್ನು ಗುರಿಯಾಗಿಟ್ಟುಕೊಂಡು, 2007 ರಲ್ಲಿ ಭಾರತೀಯ ಪುನರ್ವಸತಿ ಮಂಡಳಿಯ (RCI) ನಿಂದ ಮಾನ್ಯತೆ ಪಡೆದು ದೂರ ಸಂಪರ್ಕದ ಮೂಲಕ ಡಿಪ್ಲೊಮಾ ಇನ್ ಹಿಯರಿಂಗ್ ಲಾಂಗ್ವೇಜ್ ಅಂಡ್ ಸ್ಪೀಚ್ (ಡಿಹೆಚ್ಎಲ್ಎಸ್ - ಶ್ರವಣ, ಭಾಷೆ ಮತ್ತು ವಾಕ್ ವಿಷಯದಲ್ಲಿ ಡಿಪ್ಲೊಮಾ) ಕಾರ್ಯಕ್ರಮವನ್ನು ಪ್ರಾರಂಭಿಸಿತು. ಈ ಕಾರ್ಯಕ್ರಮವನ್ನು ಪುದುಚೇರಿಯ ಜಿಪ್ಮರ್ , ಇಂಫಾಲ್ನ ರಿಮ್ಸ್, ಮುಂಬೈ ನ ಎಐಐಪಿಎಂಆರ್ ಮತ್ತು ನವದೆಹಲಿಯ ಎಂಎಎಂಸಿ ಗೆ ಸಂಪರ್ಕ ಕಲ್ಪಿಸುವ ಮೂಲಕ ಪ್ರಾರಂಭಿಸಲಾಯಿತು. ಸಂಸ್ಥೆಯು 2008-2009 ರಲ್ಲಿ, ಅಜ್ಮೀರ್ನ ಜವಾಹರ್ ಲಾಲ್ ನೆಹರು ವೈದ್ಯಕೀಯ ಕಾಲೇಜು, ಶಿಮ್ಲಾದ ಇಂದಿರಾ ಗಾಂಧಿ ವೈದ್ಯಕೀಯ ಕಾಲೇಜು, ಜಬಲ್ಪುರದ ನೇತಾಜಿ ಸುಭಾಷ್ ಚಂದ್ರ ಬೋಸ್ ವೈದ್ಯಕೀಯ ಕಾಲೇಜು, ಲಕ್ನೋದ ಕಿಂಗ್ ಜಾರ್ಜ್ ವೈದ್ಯಕೀಯ ವಿಶ್ವವಿದ್ಯಾಲಯ, ರಾಂಚಿಯ ರಾಜೇಂದ್ರ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಮತ್ತು ವೈದ್ಯಕೀಯ ಕಾಲೇಜು ,ಕಟಕ್ನ ಶ್ರೀ ರಾಮಚಂದ್ರ ಭಂಜ್ ಒಳಗೊಂಡಂತೆ ಒಟ್ಟು ಆರು ವೈದ್ಯಕೀಯ ಕಾಲೇಜುಗಳಲ್ಲಿ ಅಧ್ಯಯನ ಕೇಂದ್ರಗಳನ್ನು ಸೇರ್ಪಡೆಗೊಳಿಸಿತು. 2009-10 ರಲ್ಲಿ ಭಗಲ್ಪುರದ ಜವಾಹರಲಾಲ್ ನೆಹರು ವೈದ್ಯಕೀಯ ಕಾಲೇಜಿನಲ್ಲಿ ಮತ್ತೊಂದು ಕೇಂದ್ರವನ್ನು ಪ್ರಾರಂಭಿಸಲಾಯಿತು.
ಸದ್ಯ ಥಿಯರಿ ತರಗತಿಗಳನ್ನು ಮೈಸೂರು ಕೇಂದ್ರದಿಂದ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ನಡೆಸಲಾಗುತ್ತದೆ. ದೇಶಾದ್ಯಂತದ ವಿದ್ಯಾರ್ಥಿಗಳು ಒಂದೇ ಸಮಯದಲ್ಲಿ ವೀಡಿಯೊ-ಕಾನ್ಫರೆನ್ಸಿಂಗ್ ಮೂಲಕ ನೇರವಾಗಿ ಸಂವಾದ ನಡೆಸಲು ಇದು ಅನುವು ಮಾಡಿಕೊಡುತ್ತದೆ. ವೃತ್ತಿಪರರ ಮೇಲ್ವಿಚಾರಣೆಯಲ್ಲಿ ಆಯಾ ಅಧ್ಯಯನ ಕೇಂದ್ರಗಳಲ್ಲಿ ಚಿಕಿತ್ಸಾ ತರಬೇತಿಯನ್ನು ಪ್ರತಿನಿತ್ಯ ನೀಡಲಾಗುತ್ತದೆ.
ಹಳ್ಳಿ, ಬ್ಲಾಕ್ / ತಾಲ್ಲೂಕು ಮತ್ತು ಪಟ್ಟಣ ಮಟ್ಟದಲ್ಲಿ ಮಾತು, ಭಾಷೆ ಮತ್ತು ಶ್ರವಣ ನ್ಯೂನತೆಗಳ ತಪಾಸಣೆ ಮತ್ತು ಅದರ ಚಿಕಿತ್ಸೆ ಮತ್ತು ತರಬೇತಿಗಾಗಿ ಮಾನವ ಸಂಪನ್ಮೂಲವನ್ನು (ವಾಕ್ ಮತ್ತು ಶ್ರವಣ ತಂತ್ರಜ್ಞರು / ಸಹಾಯಕರು) ಅಭಿವೃದ್ಧಿಪಡಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ಡಿಎಚ್ಎಲ್ಎಸ್ ಕಾರ್ಯಕ್ರಮವನ್ನು ಶ್ರವಣ ವಿಜ್ಞಾನ ಹಾಗೂ ವಾಕ್-ಭಾಷಾ ವಿಷಯದಲ್ಲಿ ಪದವಿ (ಬ್ಯಾಚುಲರ್) ಕಾರ್ಯಕ್ರಮಕ್ಕೆ ಹಂತ ಹಂತವಾಗಿ ಅಪ್ಗ್ರೇಡ್ ಮಾಡಲು ಯೋಜಿಸಲಾಗಿದೆ. ಇದರ ಮೊದಲ ಹಂತವಾಗಿ, 2014-15 ರಲ್ಲಿ ಜಬಲ್ಪುರದ ನೇತಾಜಿ ಸುಭಾಷ್ ಚಂದ್ರ ಬೋಸ್ ವೈದ್ಯಕೀಯ ಕಾಲೇಜು; ಇಂಫಾಲ್ ನ ಪ್ರಾದೇಶಿಕ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮತ್ತು ಪುದುಚೇರಿಯ ಜವಾಹರಲಾಲ್ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ (ಜಿಪ್ಮರ್), ಕೇಂದ್ರಗಳಲ್ಲಿ ಡಿಹೆಚ್ಎಲ್ಎಸ್ ಕಾರ್ಯಕ್ರಮವನ್ನು ಪದವಿ ಕಾರ್ಯಕ್ರಮಕ್ಕೆ ಉನ್ನತೀಕರಿಸಲಾಗಿದೆ.
ಡಿಹೆಚ್ಎಲ್ಎಸ್ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿಗಳಿಗೆ ಸ್ವಯಂ ಕಲಿಕಾ ಸಾಮಗ್ರಿಗಳು ಲಭ್ಯವಿದೆ. ಭಾರತೀಯ ಪುನವರ್ಸತಿ ಮಂಡಳಿಯ ಪಠ್ಯಕ್ರಮವನ್ನು ಆಧರಿಸಿ ಈ ಕಲಿಕಾ ಸಾಮಗ್ರಿಗಳನ್ನು ಅಭಿವೃದ್ಧಿಪಡಿಸಲಾಗಿದೆ. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕಲಿಕಾ ಸಾಮಗ್ರಿಯ್ನನು ಹಿಂದಿ ಭಾಷೆಗೆ ಅನುವಾದಿಸಲಾಗುತ್ತಿದೆ.
ದಾಖಲಾದ ವಿದ್ಯಾರ್ಥಿಗಳು ಈ ಕೆಳಗಿನ ಕೋರ್ಸ್ಗಳನ್ನು ಕಲಿಯಲು ಅವಕಾಶವನ್ನು ಪಡೆಯುತ್ತಾರೆ:
- ಕೋರ್ಸ್ I ಶ್ರವಣವಿಜ್ಞಾನದ ಪರಿಚಯ
- ಕೋರ್ಸ್ IIವಾಕ್-ಭಾಷಾ ದೋಷದ ಪರಿಚಯ
- ಕೋರ್ಸ್ III ಸಂವಹನ ನ್ಯೂನತೆಗಳ ನಿರ್ವಹಣೆ I
- ಕೋರ್ಸ್ I ಸಂವಹನ ನ್ಯೂನತೆಗಳ ನಿರ್ವಹಣೆ II
ಕಾರ್ಯಕ್ರಮದ ಅವಧಿ: ಒಂದು ವರ್ಷ
ಒಟ್ಟು ಸೀಟುಗಳ ಸಂಖ್ಯೆ: 30 ಸಂಖ್ಯೆ (ಪ್ರತಿ ಅಧ್ಯಯನ ಕೇಂದ್ರಕ್ಕೆ)
ಆಯ್ಕೆ ವಿಧಾನ: 2017-18 ಶೈಕ್ಷಣಿಕ ಅವಧಿಯಿಂದ, ಡಿಪ್ಲೊಮಾ/ಸರ್ಟಿಫಿಕೇಟ್ ಮಟ್ಟದ ಕೋರ್ಸ್ಗಳಿಗೆ ಪ್ರವೇಶಕ್ಕಾಗಿ ಭಾರತೀಯ ಪುನರ್ವಸತಿ ಮಂಡಳಿಯು ಅಖಿಲ ಭಾರತ ಆನ್ಲೈನ್ ಆಪ್ಟಿಟ್ಯೂಡ್ ಟೆಸ್ಟ್ (ಎಐಒಎಟಿ) ಅನ್ನು ಪರಿಚಯಿಸಿದೆ. ಅಂತೆಯೇ, ಭಾರತೀಯ ಪುನರ್ವಸತಿ ಮಂಡಳಿಯು ನಡೆಸುವ ಮೇಲೆ ಹೇಳಿದ ಆನ್ಲೈನ್ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳಿಗೆ ಮಾತ್ರವೇ ಡಿಹೆಚ್ಎಲ್ಎಸ್ ಕೋರ್ಸ್ಗೆ ಪ್ರವೇಶ ನೀಡಲಾಗುತ್ತದೆ.
ಅರ್ಹತೆ: ದ್ವಿತೀಯ ಪಿಯುಸಿಯಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ ಮತ್ತು ಗಣಿತ/ಕಂಪ್ಯೂಟರ್ ವಿಷಯಗಳನ್ನು ಅಭ್ಯಸಿಸಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಡಿಹೆಚ್ಎಲ್ಎಸ್ ಡಿಪ್ಲೊಮಾ ಕಾರ್ಯಕ್ರಮಕ್ಕೆ ದಾಖಲಾಗಲು ಅವಕಾಶ ಕಲ್ಪಿಸಲಾಗಿದೆ.
ಶಿಷ್ಯವೇತನ: ಡಿಹೆಚ್ಎಲ್ಎಸ್ ಕೋರ್ಸ್ಗೆ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು 250 ರೂನಂತೆ ಒಟ್ಟು ಹತ್ತು ತಿಂಗಳ ಕಾಲ ಶಿಷ್ಯವೇತನವನ್ನು ನೀಡಲಾಗುತ್ತದೆ.
ಉದ್ಯೋಗವಕಾಶಗಳು: ಈ 10 ತಿಂಗಳ ಕಾರ್ಯಕ್ರಮವನ್ನು ಪೂರ್ಣಗೊಳಿಸಿದ ನಂತರ, ವಿದ್ಯಾರ್ಥಿಗಳು ಭಾರತೀಯ ಪುನರ್ವಸತಿ ಮಂಡಳಿಯಿಂದ (RCI) ಪ್ರಮಾಣಪತ್ರವನ್ನು ಪಡೆಯಲು ಅರ್ಹರಾಗುತ್ತಾರೆ. ನಂತರದಲ್ಲಿ ಇವರು ವಾಕ್ ಮತ್ತು ಶ್ರವಣ ಸಹಾಯಕರು ಅಥವಾ ವಾಕ್ ಮತ್ತು ಶ್ರವಣ ತಂತ್ರಜ್ಞರಾಗಿ ಕೆಲಸ ಮಾಡಲು ಅರ್ಹತೆಯನ್ನು ಪಡೆದುಕೊಳ್ಳುತ್ತಾರೆ. ಇವರು ಸಂವಹನ ನ್ಯೂನತೆಗಳಿಗಾಗಿ ತಪಾಸಣೆ ನಡೆಸಿ ಹೆಚ್ಚಿನ ಪರೀಕ್ಷೆಗಾಗಿ ಸಲಹೆ ನೀಡುತ್ತಾರೆ. ಸಾಮಾನ್ಯವಾಗಿ ಇವರು ಸಂವಹನ ನ್ಯೂನತೆಯುಳ್ಳ ವ್ಯಕ್ತಿಗಳ ತಪಾಸಣೆ, ಮೌಲ್ಯಮಾಪನ, ಮತ್ತು ಚಿಕಿತ್ಸಕ ನಿರ್ವಹಣೆಯಂತಹ ಚಟುವಟಿಕೆಗಳನ್ನು ಕೈಗೊಳ್ಳುತ್ತಾರೆ. ಇವರು ಮಕ್ಕಳ ಮಾರ್ಗದರ್ಶನ ಕೇಂದ್ರಗಳು, ಜಿಲ್ಲಾ ಜನರಲ್ ಆಸ್ಪತ್ರೆಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಶ್ರವಣದೋಷವುಳ್ಳ ಮಕ್ಕಳ ವಿಶೇಷ ಶಾಲೆಗಳು, ಅಂತರ್ವೇಶನ ಶಾಲೆಗಳಲ್ಲಿ ಉದ್ಯೋಗವಕಾಶಗಳನ್ನು ಪಡೆಯುತ್ತಾರೆ. ಮಾತ್ರವಲ್ಲದೆ, ಕಿವುಡುತನದ ತಡೆಗಟ್ಟುವಿಕೆ ಮತ್ತು ನಿಯಂತ್ರಣದ ರಾಷ್ಟ್ರೀಯ ಕಾರ್ಯಕ್ರಮದ ಅಡಿಯಲ್ಲಿ ಸಹ ಕೆಲಸಗಳು ಲಭ್ಯವಾಗುತ್ತವೆ. ಈ ಕೋರ್ಸ್ ಪೂರ್ಣಗೊಂಡ ನಂತರ ಈ ಅಭ್ಯರ್ಥಿಗಳಿಗೆ ಹೆಚ್ಚಿನ ಅಧ್ಯಯನಕ್ಕಾಗಿ ಬ್ಯಾಚುಲರ್ ಆಫ್ ಆಡಿಯಾಲಜಿ ಮತ್ತು ಸ್ಪೀಚ್ ಲ್ಯಾಂಗ್ವೇಜ್ ಪ್ಯಾಥಾಲಜಿ (B.ASLP) ಕಾರ್ಯಕ್ರಮವನ್ನು ಸಹ ಆಯ್ಕೆ ಮಾಡಲು ಅವಕಾಶವಿದೆ.