ಮೈಸೂರಿನಲ್ಲಿರುವ ನಮ್ಮ ಹೆಮ್ಮೆಯ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ ಸ್ಥಾಪನೆಗೆ ಕಾರಣವಾದದ್ದು (AIISH), ಮೈಸೂರು ಸಂಸ್ಥಾನದ 25 ನೇ ಮತ್ತು ಕೊನೆಯ ಮಹಾರಾಜರಾದ (1940-1950) ಶ್ರೀ ಜಯಚಾಮರಾಜ ಒಡೆಯರ್ ಅವರ ದೂರದೃಷ್ಟಿ ಎಂದರೆ ತಪ್ಪಾಗಲಿಕ್ಕಿಲ್ಲ.
ಶ್ರೀ ಜಯಚಾಮರಾಜ ಒಡೆಯರ್ ಅವರು ಏಪ್ರಿಲ್ 1, 1959 ರಂದು ಅಮೆರಿಕಕ್ಕೆ ವೈಯಕ್ತಿಕ ಪ್ರವಾಸ ಕೈಗೊಂಡ ಸಂದರ್ಭದಲ್ಲಿ, ಕಾನ್ಸಾಸ್‌ನ ವಿಚಿಟಾದಲ್ಲಿ ವಾಕ್ ಮತ್ತು ಶ್ರವಣದೋಷವುಳ್ಳ ಮಕ್ಕಳ ಶಿಕ್ಷಣ, ಸಂಶೋಧನೆ ಮತ್ತು ಚಿಕಿತ್ಸೆಗೆ ಮೀಸಲಾಗಿದ್ದ 'ಇನ್ ಸ್ಟಿಟ್ಯೂಟ್ ಆಫ್ ಲೋಗೋಪೆಡಿಕ್ಸ್'ಗೆ ಭೇಟಿ ನೀಡಿದ್ದರು. ಸಂಸ್ಥೆಯ ಕೆಲಸದಿಂದ ತೀವ್ರವಾಗಿ ಪ್ರಭಾವಿತರಾದ ಮಹಾರಾಜರು ಸಂವಹನ ನ್ಯೂನ್ಯತೆಯುಳ್ಳ ವ್ಯಕ್ತಿಗಳಿಗಾಗಿ ಭಾರತದಲ್ಲಿಯೂ ಸಹ ಅದೇ ರೀತಿಯ ಸಂಸ್ಥೆಯೊಂದನ್ನು ಪ್ರಾರಂಭಿಸುವ ಕನಸು ಕಂಡರು.

ಮೈಸೂರಿನ ಅಂದಿನ ಮಹಾರಾಜರಾದ ಶ್ರೀ ಜಯಚಾಮರಾಜ ಒಡೆಯರ್ ಅವರು 24.04.1959 ರಂದು ವಿಚಿಟಾದ ಇನ್‌ಸ್ಟಿಟ್ಯೂಟ್ ಆಫ್ ಲೋಗೋಪೆಡಿಕ್ಸ್ ಗೆ ಭೇಟಿ ನೀಡಿದ ಸಂದರ್ಭ (ಎಡಚಿತ್ರದಲ್ಲಿ ) ಡಾ. ಎಂ. ಎಫ್ ಪಾಲ್ಕರ್ ಅವರೊಂದಿಗೆ ಮಹಾರಾಜರು; (ಮಧ್ಯಚಿತ್ರದಲ್ಲಿ) ಮಾತು ಮತ್ತು ಶ್ರವಣ ತೊಂದರೆಯುಳ್ಳ ಮಕ್ಕಳು ಹಾಗೂ (ಬಲಚಿತ್ರದಲ್ಲಿ ) ಮಾತು ಮತ್ತು ಶ್ರವಣ ಚಿಕಿತ್ಸೆಯನ್ನು ಗಮನಿಸುತ್ತಿರುವ ಮಹಾರಾಜರು
ಭೇಟಿಯ ವೇಳೆ ಮಹಾರಾಜರು ಆ ಇನ್‌ಸ್ಟಿಟ್ಯೂಟ್ ಆಫ್ ಲೋಗೋಪೆಡಿಕ್ಸ್ ಸಂಸ್ಥೆಯ ಸ್ಥಾಪಕರು ಹಾಗೂ ನಿರ್ದೇಶಕರೂ ಆಗಿದ್ದ ಡಾ. ಮಾರ್ಟಿನ್ ಫ್ರಾಂಕ್ಲಿನ್ ಪಾಲ್ಕರ್ ಅವರೊಂದಿಗೆ ಚರ್ಚೆ ನಡೆಸಿದರು. ಮಹಾರಾಜರ ಮನವಿಯ ಮೇರೆಗೆ ಭಾರತ ಸರ್ಕಾರವು 1963ರಲ್ಲಿ ಡಾ. ಪಾಲ್ಕರ್ ಅವರನ್ನು ಆರೋಗ್ಯ ಸಚಿವಾಲಯಕ್ಕೆ ಸಲಹೆಗಾರರನ್ನಾಗಿ ನೇಮಿಸಿತು. ಡಾ. ಪಾಲ್ಟರ್ ಭಾರತದಲ್ಲಿ ಸಮಗ್ರ ಅಧ್ಯಯನ ನಡೆಸಿ ದೇಶಕ್ಕೆ ವಾಕ್-ಶ್ರವಣ ಕ್ಷೇತ್ರಕ್ಕೆ ರಾಷ್ಟ್ರೀಯ ಮಟ್ಟದ ಸಂಸ್ಥೆಯೊಂದರ ಅಗತ್ಯವಿದೆ ಎಂಬ ವರದಿಯನ್ನು ನೀಡಿದರು.
ಡಾ. ಪಾಲ್ಕರ್ ಅವರ ಶಿಫಾರಸಿನಂತೆ, 1965ರಲ್ಲಿ ಭಾರತ ಸರ್ಕಾರವು ಮೈಸೂರಿನಲ್ಲಿ 'ಇನ್‌ಸ್ಟಿಟ್ಯೂಟ್ ಆಫ್ ಲೋಗೋಪೆಡಿಕ್ಸ್' ಹೆಸರಿನಲ್ಲಿ ಸಂಸ್ಥೆಯೊಂದನ್ನು ಸ್ಥಾಪಿಸಿತು. ಈ ಸಂಸ್ಥೆ ಮೊದಲಿಗೆ ಕಾರ್ಯಾರಂಭ ಮಾಡಿದ್ದು, ಜೆ.ಎಲ್.ಬಿ. ರಸ್ತೆಯಲ್ಲಿದ್ದ ರಾಮಮಂದಿರದಲ್ಲಿ. ಭಾರತೀಯ ಸಶಸ್ತ್ರಪಡೆಗಳ ವೈದ್ಯಕೀಯ ಸೇವೆಗಳ ಮಾಜಿ ಮಹಾನಿರ್ದೇಶಕರಾದ ಲೆ. ಜನರಲ್ ಬಿ. ಎಂ. ರಾವ್ ಅವರು ಸಂಸ್ಥೆಯ ಪ್ರಥಮ ನಿರ್ದೇಶಕರಾದರು.

ಇನ್ಸಿಟ್ಯೂಟ್ ಆಫ್ ಲೋಗೋಪೆಡಿಕ್ಸ್, ರಾಮಮಂದಿರ
ಆದರೆ, ಸಂಸ್ಥೆಗೆ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳಲು ಸಾಕಷ್ಟು ದೊಡ್ಡ ಆವರಣದ ಅಗತ್ಯವಿತ್ತು. ಇದನ್ನು ಮನಗಂಡ ಶ್ರೀ ಜಯಚಾಮರಾಜ ಒಡೆಯರ್ ಅವರು ಮೈಸೂರಿನ ಮಾನಸಗಂಗೋತ್ರಿಯ ಸುಂದರ ಪರಿಸರದಲ್ಲಿ ತಮ್ಮ 22 ಎಕರೆ ಭೂಮಿಯನ್ನು ದಾನಮಾಡಿದರು. ನಂತರ, 1966ರ ಜುಲೈ 25ರಂದು, ರಾಷ್ಟ್ರಪತಿ ಡಾ. ಎಸ್. ರಾಧಾಕೃಷ್ಣನ್ ಅವರಿಂದ ಸಂಸ್ಥೆಯ ಶಿಲಾನ್ಯಾಸ ನೆರವೇರಿತು. ಅಕ್ಟೋಬರ್ 10, 1966ರಂದು, ಸಂಸ್ಥೆಯನ್ನು ಸೊಸೈಟೀಸ್ ರಿಜಿಸ್ಟ್ರೇಷನ್ ಆಕ್ಟ್ ಅಡಿಯಲ್ಲಿ ಸ್ವಾಯತ್ತ ಸಂಸ್ಥೆಯಾಗಿ ನೋಂದಾಯಿಸಲಾಯಿತು. ಇದೇ ವೇಳೆ ಸಂಸ್ಥೆಗೆ 'ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆ (AIISH)' ಎಂದು ಮರು ನಾಮಕರಣ ಮಾಡಲಾಯಿತು.

ಅಂದಿನ ರಾಷ್ಟ್ರಪತಿ ಗೌರವಾನ್ವಿತ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರು ಸಂಸ್ಥೆಯ ಶಂಕುಸ್ಥಾಪನೆ ನೆರವೇರಿಸುತ್ತಿರುವುದು
ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆಯು ಸ್ಥಾಪನೆಯಾದಂದಿನಿಂದಲೂ, ಸಂವಹನ ನ್ಯೂನ್ಯತೆಗಳ ಕ್ಷೇತ್ರದಲ್ಲಿ ಶಿಕ್ಷಣ, ಸಂಶೋಧನೆ, ವೈದ್ಯಕೀಯ ಸೇವೆಗಳು ಹಾಗೂ ಜನರಲ್ಲಿ ಅರಿವು ಮೂಡಿಸಲೆಂದೇ ಸಮರ್ಪಿತವಾಗಿದ್ದು, ರಾಷ್ಟ್ರಮಟ್ಟದಲ್ಲಿ ಅತಿ ಶ್ರೇಷ್ಠ ಸಂಸ್ಥೆಯಾಗಿ ಬೆಳೆದು ಬಂದಿದೆ. ಇಂದು ವಾಕ್-ಶ್ರವಣ ಕ್ಷೇತ್ರದಲ್ಲಿ ದೇಶದ ಹೆಮ್ಮೆಯ ಸಂಸ್ಥೆಯಾಗಿರುವ ಆಯಿಷ್ ರೂಪುಗೊಂಡಿದ್ದು ಮಾತ್ರ, ಮೈಸೂರು ಮಹಾರಾಜರ ದೂರದೃಷ್ಟಿ, ಭಾರತದ ಸರ್ಕಾರದ ಬೆಂಬಲ ಮತ್ತು ಡಾ. ಪಾಲ್ಕರ್ ಅವರ ತಜ್ಞತೆ - ಇವುಗಳಲ್ಲದರ ಸಮನ್ವಯದಿಂದ ಮಾತ್ರವೇ ಎಂದರೆ ಅತಿಶಯೋಕ್ತಿಯಲ್ಲ!












